Wednesday 13 November 2013

ಇಂದು ನವೆಂಬರ್ 14, ರಾಷ್ಟ್ರೀಯ ಗ್ರಂಥಾಲಯ  ದಿನ ತನ್ನಿಮಿತ್ತ  ಲೇಖನ 

         ಗ್ರಂಥಗಳು ಮಾನವನ  ಅತ್ಯುತ್ತಮ ಸಂಗಾತಿಗಳು, ಗ್ರಂಥಗಳು ಮಾನವನ ಬದುಕನ್ನು ಬೆಳಗಬಲ್ಲ ಆಶಾಕಿರಣಗಳು ಎಂಬ ಉಕ್ತಿಯಂತೆ ಗ್ರಂಥಾಲಯಗಳು ಮಾನವನಿಗೆ ಅವಶ್ಯವಾಗಿ ಬೇಕಾದ ಜ್ಞಾನವನ್ನು ನೀಡುವ ಕಲ್ಪವೃಕ್ಷಗಳಾಗಿವೆ. ಎಲ್ಲರೂ ಎಲ್ಲವಿಧವಾದ ಜ್ಞಾನವನ್ನು ಹೊಂದುವುದು ಕಷ್ಟಸಾಧ್ಯ ಕಾರಣ ಎಲ್ಲರೂ ತಮಗೆ ತಿಳಿದ ಜ್ಞಾನವನ್ನು ಸಂಗ್ರಹಿಸಲು ಹುಡುಕಿಕೊಂಡ ಮಾದ್ಯಮವೇ ಗ್ರಂಥಗಳು. ಈ ರೀತಿ ಅನುಭವಿಗಳಿಂದ, ಜ್ಞಾನಿಗಳಿಂದ ಸಂಗ್ರಹಿತವಾದ ಮಾಹಿತಿಗಳನ್ನು ಗ್ರಂಥಗಳ ಮೂಲಕ ಪ್ರಕಾಶಕರು ಪ್ರಕಟಿಸಿದರು. ಈ ಎಲ್ಲಾ ಗ್ರಂಥಗಳು ಎಲ್ಲರಿಗೂ ಉಪಯುಕ್ತವಾಗುವಂತೆ, ಒಂದೇ ಕಡೆ, ಅತೀ ಕಡಿಮೆ ಅವಧಿಯಲ್ಲಿ ಓದುಗರಿಗೆ ತಲುಪುವಂತೆ ಯಾವುದೇ ಲಾಭವನ್ನು ಪರಿಗಣಿಸದೇ ಸೇವೆಯನ್ನು ಗೈಯುತ್ತಿರುವ ಕೇಂದ್ರಗಳೇ ಈ ಗ್ರಂಥಾಲಯಗಳು. ಮೊದಮೊದಲು ಗ್ರಂಥಾಲಯವೆಂದರೆ ಬರೀ ಪುಸ್ತಕಗಳ ಸಂಗ್ರಹ ಕೇಂದ್ರ, ಗ್ರಂಥಪಾಲಕರೆಂದರೆ ಬರೀ ಅದರ ಮೇಲ್ವಿಚಾರಕರು ಎಂಬ ಸಂಕುಚಿತ ಮನೋಭಾವನೆ ಹೊಂದಿದ್ದ ಕಾಲದಲ್ಲಿ ಅಪ್ರತಿಮ ಚಾಣಾಕ್ಷತನದಿಂದ, ಅತ್ಯುತ್ಸಾಹದಿಂದ ಭಾರತದ ಗ್ರಂಥಾಲಯಗಳಿಗೆ ಪುನರುಜ್ಜೀವನ ಕಲ್ಪಿಸಿ ಸೈದ್ದಾಂತಿಕವಗಿ, ಪ್ರಾಯೋಗಿಕವಾಗಿ ಗ್ರಂಥಾಲಯಗಳ ಅಭಿವೃದ್ದಿಗೆ ಕಂಕಣ ಬದ್ದರಾಗಿ ಸಾಕಷ್ಟು ಬದಲಾವಣೆಗೈದು ಗ್ರಂಥಾಲಯ ಪಿತಾಮಹನೆನೆಸಿಕೊಂಡವರು ಶ್ರೀಯತ ಎಸ್. ಆರ್. ರಂಗನಾಥನ್‍ರವರು.ಅಲ್ಲದೇ ಸಹಪಠ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ರಂಗನಾಥನ್ ರು 1921ರಿಂದ 1923 ರವರೆಗೆ ಮದ್ರಾಸಿನ ಶಿಕ್ಷಕರ ಸಂಘದ ಗಣಿತಶಾಸ್ತ್ರ ಮತ್ತು ವಿಜ್ಞಾನ ವಿಭಾಗದ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದರಲ್ಲದೇ ತಮ್ಮ ಬರವಣಿಗೆ ಮತ್ತು ಲೇಖನಗಳ ಮೂಲಕ ಖಾಸಗೀ ಶಾಲಾ ಶಿಕ್ಷಕರೂ ಕೂಡ ಪಿಂಚಣಿ ಪಡೆಯುವಂತೆ ಮಾಡಲು ಸಾಕಷ್ಟು ಶ್ರಮಿಸಿದರು.ಇದೇ ಸಂದರ್ಭದಲ್ಲಿ ಮದ್ರಾಸ್ ವಿಶ್ವ ವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಆಕಸ್ಮಿಕವಾಗಿ ಇವರನ್ನು 1924 ರಲ್ಲಿ ವಿಶ್ವ ವಿದ್ಯಾಲಯದ ಪ್ರಪ್ರಥಮ ಗ್ರಂಥ ಪಾಲಕರನ್ನಾಗಿ ನೇಮಿಸಲಾಯಿತು.ನಂತರದಲ್ಲಿ ಗ್ರಂಥಾಲಯ ಕ್ಷೇತ್ರಗಳಲ್ಲಿದ್ದ ಹಲವಾರು ಸಮಸ್ಯೆಗಳನ್ನು ಗುರುತಿಸಿ ಅವುಗಳ ಪರಿಹಾರಕ್ಕಾಗಿ ಹೆಚ್ಚಿನ ತರಭೇತಿಗಾಗಿ ಇಂಗ್ಲೇಡಿಗೆ ಪ್ರಯಾಣ ಬೆಳೆಸಿದರು.ಅಲ್ಲಿ  ಕ್ರಾಯ್ಡನ್ ನ ಸಾರ್ವಜನಿಕ ಗ್ರಂಥಾಲಯದ  ಮುಖ್ಯ ಗ್ರಂಥಪಾಲಕರೂ , ಪ್ರಸಿದ್ದ ಉಪನ್ಯಾಸಕರೂ ಆಗಿದ್ದ  ಡಬ್ಲ್ಯು.ಸಿ. ಸೇಯರ್ಸ್ ರವರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡು ಮತ್ತು ಹಲವಾರು ಪ್ರಸಿದ್ದ ಗ್ರಂಥಾಲಯಗಳಿಗೆ ಭೇಟಿನೀಡಿ ಉತ್ತಮ ಜ್ಞಾನವನ್ನು, ಅನುಭವವನ್ನು ಪಡೆದುಕೊಂಡು 1929 ಜುಲೈಯಲ್ಲಿ ಭಾರತಕ್ಕೆ ಮರಳಿದರು.

ಗ್ರಂಥಾಲಯ ಕ್ಷೇತ್ರದಲ್ಲಿ ರಂಗನಾಥನ್‍ರವರ ಸಾಧನೆಗಳು: 

         ಇಂಗ್ಲೇಂಡಿನಿಂದ ಮರಳಿ ಬಂದ ಮೇಲೆ ಭಾರತದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿ ನೂತನ ಕ್ರಾಂತಿಯನ್ನೇ ಮಾಡಿದರು.ಮೊದಲಿಗೆ ಮದ್ರಾಸ್ ವಿಶ್ವ ವಿದ್ಯಾಲಯದ ಗ್ರಂಥಾಲಯದಲ್ಲಿ ಓದುಗರಿಗೆ ಸುಲಭವಾಗಿ ಪುಸ್ತಕಗಳು ದೊರೆಯುವಂತೆ ಮಾಡಲು ಸಾಕಷ್ಟು ಹೊಸ ವಿಧಾನಗಳನ್ನು ಕಂಡುಹಿಡಿದು ಗ್ರಂಥಾಲಯದಲ್ಲಿ ಓದುಗರಿಗೆ ಅನುಕೂಲವಾಗುವಂತಹ ಹಲವಾರು ಪದ್ದತಿಗಳನ್ನು ಜಾರಿಯಲ್ಲಿ ತಂದರು. ಬರುಬರುತ್ತಾ ಅವರಿಗೆ ಈ ಒಂದು ಕ್ಷೇತ್ರದಲ್ಲೇ ಅವರ ಆಸಕ್ತಿ ಹೆಚ್ಚಾಯಿತು. 1929 ರಲ್ಲಿ ಗ್ರಂಥಾಲಯ ಶಾಲೆಯನ್ನು ಆರಂಭಿಸಿದರು ತದನಂತರಲ್ಲಿ ಇದು ಮದ್ರಾಸ್ ವಿಶ್ವ ವಿದ್ಯಾಲಯದಲ್ಲಿ ಲೀನವಾಯಿತು. ಮೊದಲು ಗ್ರಂಥಾಲಯದ ಪಂಚ ಸೂತ್ರಗಳನ್ನು ಪ್ರಸ್ತುತಪಡಿಸಿದರು ಮತ್ತು 1927 ರಲ್ಲಿ ಗ್ರಂಥಾಲಯದ ಪಂಚ ಸೂತ್ರಗಳು ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಅವುಗಳು ಸಾರ್ವಕಾಲಿಕ ಸಿಂಧುವಾಗಿ ಪ್ರಸಿದ್ದಿಯನ್ನು ಪಡೆದಿವೆ. ಅವುಗಳೆಂದರೆ,
1.      ಗ್ರಂಥಗಳಿರುವುದು ಉಪಯೋಗಿಸಲು2.      ಪ್ರತೀಯೊಬ್ಬ ಓದುಗನೀಗೂ ಪುಸ್ತಕ3.      ಪ್ರತೀಯೊಂದು ಪುಸ್ತಕವೂ ಓದಗನ್ನು ಪಡೆದಿದೆ.4.      ಓದುಗರ ಸಮಯವನ್ನು ಉಳಿಸಿ5.      ಗ್ರಂಥಾಲಯವು ಒಂದು ಬೆಳೆಯುವ ಜೈವಿಕ ಕ್ರಿಯೆ.ಗ್ರಂಥಾಲಯ ಕ್ಷೇತ್ರಕ್ಕೆ ತುಂಬಾ ಅನುಕೂಲವಾಗುವ ಸುಮಾರು 2000 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು  ಬರೆದಿದ್ದಾರೆ. ಅಲ್ಲದೇ ಸುಮಾರು 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, 5 ನಿಯತಕಾಲಿಕೆಗಳನ್ನು ಸಂಪಾದಿಸಿ  ಜನಮಾನಸರಾಗಿದ್ದಾರೆ. ಅಲ್ಲದೇ ಇವರ ಪ್ರಮುಖ ಕೃತಿಗಳೆಂದರೆ, Colon Classification, Classified Catalog Code, Library Administration, Chain Indexing ಮುಂತಾದುವುಗಳು.          ಸುಮಾರು 20 ವರ್ಷಗಳ ಕಾಲ ಮದ್ರಾಸ್ ವಿಶ್ವ ವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದ ನಂತರ 1944- 47 ರಲ್ಲಿ ಬನಾರಸ್ ವಿಶ್ವ ವಿದ್ಯಾಲಯದಲ್ಲಿ ಗ್ರಂಥಾಲಯ ವಿಜ್ಞಾನದ ಗೌರವ ಪ್ರಾದ್ಯಾಪಕರಾಗಿದ್ದರು.1947 ರಿಂದ 1952 ರವರೆಗೆ ದೆಹಲಿ ವಿಶ್ವ ವಿದ್ಯಾಲಯದಲ್ಲಿ  1950 ರಿಂದ 1962 ರವರೆಗೆ FID AiÀÄ Classification Research Group ನ ಅದ್ಯಕ್ಷರಾಗಿ, 1962 ರಿಂದ 1972 ರವರೆಗೆ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ  ಪ್ರಲೇಖನ ಸಂಶೋಧನಾ ಮತ್ತು ತರಭೇತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದರು.ಅಲ್ಲದೇ ಇವರು ಭಾರತ ವಿಶ್ವವಿದ್ಯಾಲಯಗಳಲ್ಲಿ ಗ್ರಂಥಾಲಯ ವಿಜ್ಞಾನವನ್ನು ಒಂದು ಭೋದನಾ ವಿಷಯವನ್ನಾಗಿ ಭೋಧಿಸಲು ಕಾರಣಕರ್ತರಾಗಿದ್ದಾರೆ. INSDOC ನವದೆಹಲಿ , DRTC ಬೆಂಗಳೂರು ಸೇರಿದಂತೆ ಹತ್ತು ಹಲವು ಸಂಸ್ಥೆಗಳನ್ನು ಸ್ಥಾಪಿಸಲು ನೆರವಾಗಿದ್ದಾರೆ.1945 ರಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಡಿಪ್ಲೋಮಾ ಕೋರ್ಸನ್ನು ಆರಂಬಿಸಿದರು.                   ಗ್ರಂಥಾಲಯ ಚಳುವಳಿಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡ ರಂಗನಾಥನ್‍ರು ಸಾರ್ವಜನಿಕ ಗ್ರಂಥಾಲಯ ಕಾಯಿದೆಗಳನ್ನು ಜಾರಿಗೆ ತರುವಲ್ಲಿ ಸಾಕಷ್ಟು ಶ್ರಮಿಸಿದ್ದರು. ಅದರ ಫಲವಾಗಿ ಇಂದು ಭಾರತದ ಹಲವಾರು ರಾಜ್ಯಗಳಲ್ಲಿ  ಗ್ರಂಥಾಲಯ ಕಾಯಿದೆಗಳು ಜಾರಿಗೆ ಬಂದು ಅವುಗಳ ಅಭಿವೃದ್ದಿಗೆ ಸಾಕಷ್ಟು ನೆರವಾಗಿದೆ. ಅಲ್ಲದೇ ಇವರು ವಿದೇಶಗಳಲ್ಲಿರುವಂತೆ ಭಾರತದಾದ್ಯಂತ ಹಲವಾರು ವಿಶಿಷ್ಟ ಗ್ರಂಥಾಲಯಗಳು ಸ್ಥಾಪನೆಯಾಗಬೇಕು  ಅವುಗಳಿಂದ ನಮ್ಮ ದೇಶದ ಜನರ ಜ್ಞಾನಮಟ್ಟ ಸುಧಾರಿಸಬೇಕೆಂಬ ಪ್ರಬಲ ಆಕಾಂಕ್ಷೆಯನ್ನು ಹೊಂದಿದ್ದರು.


ರಂಗನಾಥನ್ ರವರಿಗೆ ಒಲಿದುಬಂದ ಗೌರವಗಳು:

1948 ರಲ್ಲಿ ದೆಹಲಿ ವಿಶ್ವ ವಿದ್ಯಾಲಯವು ಡಿಲಿಟ್ ಪದವಿಯನ್ನು ನೀಡಿ ಗೌರವಿಸಿತು.1956 ರಲ್ಲಿ ಭಾರತ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು.
1964 ರಲ್ಲಿ ಪ್ರಿಟ್ಸಬರ್ಗ ವಿಶ್ವ ವಿದ್ಯಾನಿಲಯವು ಗ್ರಂಥಾಲಯ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಯನ್ನು ನೀಡಿತು.1964 ರಲ್ಲಿ  ವರ್ಗೀಕರಣ ಸಂಶೋಧನೆಯ ಮೇಲೆ ಡೆನ್ಮಾರ್ಕನಲ್ಲಿ  ನಡೆದ 2 ನೇ ಅಂತರಾಷ್ಟ್ರೀಯ ವಿಚಾರ- ಸಂಕಿರಣದ  ಗೌರವಾನ್ವಿತ ಅದ್ಯಕ್ಷರಾಗಿದ್ದರು.1965 ರಲ್ಲಿ ಭಾರತ ಸರ್ಕಾರವು ಇವರನ್ನು ಗ್ರಂಥಾಲಯ ವಿಜ್ಞಾನದ ರಾಷ್ಟ್ರೀಯ ಸಂಶೋಧನಾ ಪ್ರಾದ್ಯಾಪಕರಾಗಿ ಗೌರವಿಸಿತು.1971 ರಲ್ಲಿ ಅಮೇರಿಕಾ ಗ್ರಂಥಾಲಯ ಸಂಸ್ತೆಯಿಂದ ಮಾರ್ಗರೇಟ್ ಮನ್ ಪ್ರಶಸ್ತಿ .1976 ರಲ್ಲಿ ಇವರ ಮರಣದ ನಂತರ ಇವರ ಗೌರವಾರ್ಥವಾಗಿ, ಗ್ರಂಥಾಲಯ ವರ್ಗೀಕರಣದಲ್ಲಿ ಅಪ್ರತಿಮ ಸಾದನೆಗೈದ ಸಾಧಕರಿಗೆ ರಂಗನಾಥನ್ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ.          ಭಾರತದ ಗ್ರಂಥಾಲಯಗಳಿಗೆ ಪನರುಜ್ಜೀವನ ಕಲ್ಪಿಸಿ ಅವಗಳ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿ ಬದುಕಿನ ಕೊನೆ ಕ್ಷಣದವರೆಗೂ ಈ ಕ್ಷೇತ್ರದ ಅಭಿವೃದ್ದಿಗೆ ಕಂಕಣಬದ್ದರಾಗಿದ್ದ ಇವರು ಸೆಪ್ಟಂಬರ್ 27, 1972 ರಂದು  ತಮ್ಮ 80ನೇ ವಯಸ್ಸಿನಲ್ಲಿ ಚಿರನಿದ್ರೆಗೆ ಜಾರಿದರು. ಅಲ್ಲಿಗೆ ಭಾರತಾಂಬೆಯ ಜ್ಞಾನ ಪತಾಕೆಯನ್ನು ಉಳಿಸಿ ಬೆಳೆಸಿದ ಹೆಮ್ಮರ ನೆಲಕ್ಕುರುಳಿದಂತಾಯ್ತು. ಭಾರತದ ಗ್ರಂಥಾಲಯ ಇತಿಹಾಸದಲ್ಲೇ ಇವರದ್ದು ಅಪ್ರತಿಮ ಸಾಧನೆ. ಅವರಷ್ಟು ಎತ್ತರಕ್ಕೆ ಬೆಳೆದ ವ್ಯಕ್ತಿ ಬೇರೊಬ್ಬರಿಲ್ಲವೆನ್ನಬಹುದು. ಅವರ ಸಾವಿನ ನಂತರವೂ ಅವರ ಕುಟುಂಬವರ್ಗ ಅವರ ಕಾಯಕವನ್ನು ಮುಂದುವರೆಸಿಕೊಂಡು ಬಂದಿದ್ದು  1961 ರಲ್ಲೇ ಸ್ಥಾಪಿಸಿದ್ದ ಶಾರದಾ ರಂಗನಾಥನ್ ದತ್ತಿಯನ್ನು ಇಂದಿನವೆರೆಗೂ ಯಶಸ್ವಿಯಾಗಿ ಮುಂದುವರೆಸಿಕೊಂಡು ಬಂದು ಗ್ರಂಥಾಲಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.ಸಾಕಷ್ಟು ಸಾಧನೆಗಳನ್ನು ಗೈದ ಇವರು ಬಹಳ ಸರಳ, ಸೂಕ್ಷ್ಮ,ಸದಾ ಚಟುವಟಿಕೆಯುಳ್ಳ ವ್ಯಕ್ತಿ. ಹಲವಾರು ವ್ಯಕ್ತಿಗಳು ಇವರನ್ನು ಮಾದರಿಯನ್ನಾಗಿಸಿಕೊಂಡಿದ್ದಾರೆ. ಗ್ರಂಥಾಲಯದ ಒಳಗಡೆ ಇವರು ಪಾದರಕ್ಷೆಗಳನ್ನು ಧರಿಸುತ್ತಿರಲಿಲ್ಲ. ಗ್ರಂಥಗಳ ಬಗ್ಗೆ ಇವರು ಸಾಕಷ್ಟು ಗೌರವವನ್ನು ಹೊಂದಿದ್ದು, ಅವುಗಳ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಿದ್ದರು. ಇವರು ಗ್ರಂಥಾಲಯವೇ ದೇವಾಲಯ ಗ್ರಂಥಗಳೇ ದೇವರು. ಓದುಗರೇ ಭಕ್ತಾದಿಗಳು, ಗ್ರಂಥಪಾಲಕರೇ ಪೂಜಾರಿಗಳು ಎಂದೇ ಭಾವಿಸಿದ್ದರು. ಗ್ರಂಥಾಲಯಗಳು ಕೇವಲ ಪಸ್ತಕಗಳ ಸಂಗ್ರಹ ಕೊಠಡಿಯಾಗಿರದೇ ಜ್ಞಾನದಾಹವನ್ನು ತಣಿಸುವ, ಮತ್ತು ಓದುಗರಿಗೆ ಬೇಕಾದ ಸರಿಯಾದ ಮಾಹಿತಿಯನ್ನು ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಅತೀ ಜರೂರಾಗಿ ನೀಡುವ, ಯಾವುದೇ ಲಾಭವನ್ನು ಪರಿಗಣಿಸದೇ ಇರುವ ಒಂದು ಜ್ಞಾನ ಭಂಡಾರವೆಂದು ಪ್ರತಿಪಾದಿಸಿದರು.ಭಾರತದ ಗ್ರಂಥಾಲಯ ಕ್ಷೇತ್ರದಲ್ಲಿ ತಮ್ಮದೇ ಆದ ಹಲವಾರು ಪ್ರಯೋಗಗಳನ್ನು ಕೈಗೊಂಡು ಅಲ್ಲಿನ ಸಮಸ್ಯೆಗಳನ್ನು ಗುರುತಿಸಿ ಅವಗಳಿಗೆ ತಮ್ಮ ಗಣಿತಶಾಸ್ತ್ರದ ಆಧಾರದ ಮೇಲೆ ಸಾರ್ವತಿಕವಾದ ಪರಿಹಾರಗಳನ್ನು ಕಂಡುಹಿಡಿದು ಅವುಗಳನ್ನು ಪ್ರಚುರ ಪಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಂತೆಯೇ ಎಸ್. ಆರ್. ರಂಗನಾಥನ್‍ರವರನ್ನು ಭಾರತದ ಗ್ರಂಥಾಲಯ ಪಿತಾಮಹ ಎಂದು ಕರೆದಿರುವುದು ಅವರಿಗೆ ಸಲ್ಲಸಿದ ಅದ್ವೀತೀಯ ಗೌರವವೆಂದರೆ ಅತಿಶಯೋಕ್ತಿಯಾಗಲಾರದು. ಇವರ ಮೇಲಿನ ಗೌರವಕ್ಕಾಗಿ ಇವರ ಜನ್ಮದಿನವಾದ ಆಗಷ್ಟ್ 12 ನೇ ದಿವಸವನ್ನು ಗ್ರಂಥಪಾಲಕರ ದಿನವೆಂದು ಭಾರತ ಸರಕಾರ ಘೋಷಿಸಿದೆ.


ಭಾರತದ ಗ್ರಂಥಾಲಯ ದಿನಾಚರಣೆಯ ಹಿನ್ನಲೆ

ಅದೇರೀತಿ ಆಂದ್ರಪ್ರದೇಶ ಗ್ರಂಥಾಲಯ ಸಂಘದ ಕಾರ್ಯಾಧ್ಯಕ್ಷರಾಗಿದ್ದ ಅಯ್ಯನ್ಕಿ ವೆಂಕಟ ರಾಮಯ್ಯ ನವರು ಆಯೋಜಿಸಿದ್ದ ಅಖಿಲ ಭಾರತ ಗ್ರಂಥಾಲಯ ಸಭೆಯು 12ನೇ ನವೆಂಬರ್ 1912 ರಂದು ಮದ್ರಾಸಿನಲ್ಲಿ ನಡೆಯಿತು. ಈ ಸಭೆಯಲ್ಲಿ ಅಖಿಲ ಭಾರತ ಗ್ರಂಥಾಲಯ ಸಂಘವು ಪ್ರತೀ ವರ್ಷದ ನವೆಂಬರ್ 14 ರಂದು ರಾಷ್ಟ್ರೀಯ ಗ್ರಂಥಾಲಯ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಅಲ್ಲದೇ 1968 ರಿಂದ ಇಲ್ಲಿಯವರೆಗೆ ಪ್ರತೀವರ್ಷವೂ ಕೂಡಾ ನವೆಂಬರ್ 14 ರಿಂದ 20 ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನಾಗಿ ಭಾರತದಾದ್ಯಂತ  ಎಲ್ಲಾ ಗ್ರಂಥಾಲಯಗಳು ಆಚರಿಸುತ್ತಿವೆ.ಅಲ್ಲದೇ ಈ ಸಪ್ತಾಹದಲ್ಲಿ ಎಲ್ಲಾ ಗ್ರಂಥಾಲಯಗಳೂ ಕೂಡಾ ಗ್ರಂಥಗಳ ಪ್ರದರ್ಶನವೇರ್ಪಡಿಸಿ ಗ್ರಂಥಾಲಯಗಳ ಅಭಿವೃದ್ದಿ ಬಗ್ಗೆ ಚರ್ಚೆ, ಉಪನ್ಯಾಸಗಳನ್ನು ಏರ್ಪಡಿಸಿ ಗ್ರಂಥಾಲಯಗಳ  ಉನ್ನತೀಕರಣ, ಗ್ರಂಥಗಳ ಬಹುಪಯೋಗ, ಗ್ರಂಥಾಲಯಗಳ ಸೇವೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಿ ನಾಡಿನ, ದೇಶದ, ಸಾಮಾಜಿಕ ,ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ, ವೈಜ್ಞಾನಿಕ ಬೆಳವಣಿಗೆಗೆ ಶ್ರಮಿಸುತ್ತವೆ.ಇಂದು ಗ್ರಂಥಾಲಯಗಳನ್ನು ನಾವು ಮಾಹಿತಿ ವಿಜ್ಞಾನ ಕೇಂದ್ರಗಳೆಂದು ಕರೆಯುತ್ತಿದ್ದೇವೆ. ಅವುಗಳು ನಮಗೆ ಬೇಕಾದ ಮಾಹಿತಿಯನ್ನು ಕೇವಲ ಕ್ಷಣಾರ್ಧದಲ್ಲಿ ನಮಗೆ ನೀಡುತ್ತಿವೆ. ಅವುಗಳಿಗೆ ಈಗೀಗ ಆದುನಿಕ ಸ್ಪರ್ಷವಾಗುತ್ತಿದ್ದು ಗಣಕಯಂತ್ರ ಮತ್ತು ವಿದ್ಯುದ್ಮಾನ ಉಪಕರಣಗಳ ಮೂಲಕ ನಮಗೆ ಅತ್ಯುನ್ನತ ಸೇವೆಯನ್ನು ನೀಡಲು ಸಜ್ಜಾಗಿವೆ. ಆದರೂ ಕೂಡಾ ನಮ್ಮ ಸರಕಾರ ಗ್ರಂಥಾಲಯಗಳ ಅಭಿವೃದ್ದಿ ಕಡೆಗೆ ಗಮನ ಹರಿಸದೇ ಇರುವುದು ಖೇದವೇ ಸರಿ.

    -      ಅ.ವಿ.ಪ್ರ.ಮ., ಮಾಗಳ ಮತ್ತು          

               ಗುರು ಬಸವರಾಜ್      
            ಸಹಾಯಕ ಗ್ರಂಥಪಾಲಕರು,                                                    
 ಜಿ.ಎಮ್. ತಾಂತ್ತಿಕ ಮಹಾವಿದ್ಯಾಲಯ ದಾವಣಗೆರೆ